ಅದ್ಭುತ ಸಾಹಿತ್ಯದಲ್ಲಿ
	
ಮನುಷ್ಯ ತಾನು ವಾಸಿಸುವ ಭೂಮಿಯ ಹಾಗೂ ಅದರಾಚಿನ ಲೋಕಗಳ, ಇಡೀ ಬ್ರಹ್ಮಾಂಡದೊಳಗಣ, ಅದ್ಭುತ, ಅಲೌಕಿಕ, ಗೂಢಶಕ್ತಿಸ್ವರೂಪಗಳನ್ನು (ಸೂಪರ್‍ನ್ಯಾಚುರಲ್) ಕುರಿತು ಆಳವಾಗಿ ಚಿಂತಿಸಿದ್ದಾನೆ. ಈ ಚಿಂತನೆಯನ್ನು ವಿಶ್ವಸಾಹಿತ್ಯದ ವಿವಿಧಪ್ರಕಾರಗಳು ವಿಧವಿಧವಾಗಿ ಬಳಸಿಕೊಂಡಿವೆ. ದೇವದಾನವರು, ಭೂತಪಿಶಾಚಿಗಳು, ಮಂತ್ರಮಾಟ, ಇನ್ನಿತರ ಅವ್ಯಕ್ತ ರಹಸ್ಯವ್ಯಾಪಾರಗಳೂ ಸಾಹಿತ್ಯದ ಅಂಶವಾಗಿ, ಸೂಚ್ಯ ಅಭಿವ್ಯಕ್ತಿ ಪಡೆದು, ಸಾಹಿತಿಯ ಮೂಲಕಲ್ಪನೆಗೆ ಪರಿಪೋಷಕವಾಗಿ, ರೂಪಿತವಾಗದಿದ್ದರೆ ಅವು ಅರ್ಥ ಹೀನವಾಗಿ ಕೇವಲ ಭಾವೋದ್ರೇಕದ ಕೋಲಾಹಲಕ್ಕೆ ಕಾರಣವಾಗುತ್ತವೆ. ಅವು ಕೇವಲ ಮೂಡಕಥಾನಕ ರೂಢಿಗಳಾಗುತ್ತವೆ (ಮೋಟಿಫ್). ಮೇಲೆ ಹೇಳಿದ ಅದ್ಭುತ ಅಂಶಗಳು ಕಲೆಗೆ ಕೇವಲ ಸಾಧನಗಳು ಮಾತ್ರ. ರಾಕ್ಷಸರು, ದೇವತೆಗಳು, ಯಕ್ಷಕಿನ್ನರರು, ವಿಚಿತ್ರ ವ್ಯಕ್ತಿಗಳು ಪಾತ್ರ ವಹಿಸಿದರೂ ಸಾಹಿತಿಯ ಉದ್ದೇಶವೇ ವಿಭಿನ್ನವಾದುದರಿಂದ ವಾಲ್ಟೇರ್, ರೆಬಿಲೈಸ್, ಪೋಪ್, ಅನತೋಲ್ ಫ್ರಾನ್ಸ್ ಮುಂತಾದವರ ವಿಡಂಬ ಕೃತಿಗಳು ಅದ್ಭುತಕಥೆಗಳಾಗಿಲ್ಲ. ಭೂತಪಿಶಾಚಿಗಳ ಸುಳಿವೇ ಇಲ್ಲದಿದ್ದರೂ ಮಾಬಿ ಡಿಕ್ (ಹರ್ಮನ್ ಮೆಲ್ವಿಲ್ಲನ ಕೃತಿ) ಕಾದಂಬರಿಯಲ್ಲಿ ಅತ್ಯಂತ ಅದ್ಭುತ, ಅಲೌಕಿಕ ವಾತಾವರಣ ಸೃಷ್ಟಿಯಾಗುವುದನ್ನೂ ಗಮನಿಸಬಹುದು.
	
ಪ್ರಪಂಚದ ಸಾಹಿತ್ಯೇತಿಹಾಸದಲ್ಲಿ ಬರುವ ಧರ್ಮಗ್ರಂಥಗಳು ಹಾಗೂ ಎಲ್ಲ ಸಾಹಿತ್ಯಪ್ರಕಾರಗಳಲ್ಲಿ ಅದ್ಭುತ ಅಂಶಗಳ ಪ್ರಸ್ತಾಪ ಬಂದಿದ್ದರೂ ಅವು ಕಥೆ, ಕಾವ್ಯ, ನಾಟಕ, ವಿಡಂಬನಬರಹಗಳಲ್ಲಿ ಮಾತ್ರ ಕಲಾತ್ಮಕವಾಗಿ ಅರಳಿವೆ.
	
ರೋಮಾಂಚಕ ವಿಚಿತ್ರಸನ್ನಿವೇಶದಲ್ಲಿ ವ್ಯಕ್ತವಾಗುವ ಅವ್ಯಕ್ತ ಆತಂಕ, ಭಯ, ಭ್ರಮೆಗಳನ್ನು ಚಿತ್ರಿಸುವುದು ಅದ್ಭುತ ಅಂಶದ ಉದ್ದೇಶವಾದರೂ ಅವು ಆಗಾಗ (ಷೇಕ್ಸ್‍ಪಿಯರ್‍ನ ರಮ್ಯ ವೈನೋದಿಕಗಳಲ್ಲಿ ಬರುವಂತೆ) ಕಲ್ಪನೆಯ ಕನಸಿನ ರಾಜ್ಯ ನಿರ್ಮಿಸಬಲ್ಲುವು. ನಮಗೆ ಎಟುಕಲಾರದ ಶಕ್ತಿಸಂಪತ್ತುಗಳು, ಕೈಗೂಡಲಾರದ ಅತೃಪ್ತ ಆಕಾಂಕ್ಷೆಗಳು ಕಾಲ್ಪನಿಕ ಪ್ರಪಂಚದ ವ್ಯಕ್ತಿಗಳಿಗೆ ಕಾಣಸಿಗುವಂತಾದಾಗ ಅರೇಬಿಯನ್ ನೈಟ್ಸ್, ಕಥಾಸರಿತ್ಸಾಗರಗಳ ಭೂತ-ಬೇತಾಳಗಳ ಕಥೆಗಳು ನಮ್ಮನ್ನು ರಂಜಿಸುತ್ತವೆ.
	
ಅದ್ಭುತ ಅಂಶ ವೈವಿಧ್ಯಮಯವಾಗಿ ಪರಿಣಾಮಕಾರಿಯಾಗಿ ಒಡಮೂಡಿದೆಯೇ ಇಲ್ಲವೇ ಎನ್ನುವುದಕ್ಕೆ, ಬದಲಾಗುವ ಯುಗಧರ್ಮ, ಮೂಲಭೂತನಂಬಿಕೆಗಳು, ಸಂಪ್ರದಾಯಗಳು, ಸಾಹಿತಿಯ ಮನೋಧರ್ಮ- ಎಲ್ಲವೂ ಕಾರಣವಾಗುತ್ತವೆ. ಒಂದು ಕಾಲದಲ್ಲಿ ನಮ್ಮ ಹಾಗೆಯೇ ಸಜೀವವ್ಯಕ್ತಿಗಳೆಂಬ ಭ್ರಮೆ ಕಲ್ಪಿಸಿದ ದೇವದಾನವ, ಭೂತಪಿಶಾಚಿಗಳು. ಇನ್ನೊಂದು ಕಾಲದಲ್ಲಿ ವಿವಿಧಶಕ್ತಿಗಳ ಪ್ರತೀಕಗಳಾಗುತ್ತವೆ; ವಿe್ಞÁನಪ್ರಪಂಚದ ವಿವೇಚನೆ, ವಿಶ್ಲೇಷಣೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ. ಆದರೆ ಸಾಹಿತಿಯಾದವನು ಅದ್ಭುತ ಅಂಶವನ್ನು ಸಾಂಕೇತಿಕವಾಗಿ, ಪಾತ್ರಕಲ್ಪನೆ, ವಾತಾವರಣವೈಚಿತ್ರ್ಯ (ಕೇವಲ ಅನುಷಂಗಿಕವಾದರೂ) ಜೀವನವನ್ನು ಕುರಿತ ಚಿಂತನದ ಅಭಿವ್ಯಕ್ತಿಯಾಗಿ ಬಳಸಿದಾಗ ಕೋಲ್‍ರಿಜ್ ಕವಿಯ ಏನ್ಷಂಟ್ ಮ್ಯಾರಿನರ್‍ನಂಥ ಅಪೂರ್ವಕೃತಿಗಳು ಹುಟ್ಟುತ್ತವೆ. ತಮ್ಮ ತಮ್ಮ ಅನುಭವದ ಜೀವನದರ್ಶನದ, ಅಭಿವ್ಯಕ್ತಿಗಾಗಿಯೇ ಅದ್ಭುತ ಅಂಶವನ್ನು ಬಳಸುವ ಡ್ಯಾಂಟೆ, ಮಾರ್ಲೋ, ಮಿಲ್ಟನ್, ಗಯಟೆಯಂಥವರ ಸಾಧನೆಗಿಂತ ಕೋಲ್‍ರಿಜ್‍ನ ಕವನದಲ್ಲಿ ದಟ್ಟಯಿಸಿ ತೋರುವ ಅದ್ಭುತ ಅಂಶ ಹೆಚ್ಚು ಸರಳವೂ ಸಾಂದ್ರವೂ ಆಗಿದೆಯೆನ್ನಬಹುದು. 
	
ಅದ್ಭುತ ಅಂಶವನ್ನು ಮಾನವೀಯ ವಿವೇಚನೆಯ ನೆಲಗಟ್ಟಿನ ಮೇಲೆ ಸ್ಥಾಪಿಸುವ ಗೋಜಿಗೆ ಹೋಗದೆ ಅದನ್ನು ಅರ್ಥಪೂರ್ಣವಾಗಿ ನಾಟಕದಲ್ಲಿ ಬಳಸಿಕೊಳ್ಳಬಹುದೆನ್ನುವುದನ್ನೂ ಷೇಕ್ಸ್‍ಪಿಯರ್, ಜೆ.ಎಂ.ಸಿಂಗ್ ಮುಂತಾದವರು ತೋರಿಸಿ ಕೊಟ್ಟಿದ್ದಾರೆ. 
	
ಅದ್ಭುತ ಅಂಶದ ಬಳಕೆ ಕೇವಲ ತಂತ್ರವಾದರೆ, ಯಾಂತ್ರಿಕವಾದರೆ, ಅದು ನೀರಸವಾಗುವುದೆಂಬ ಅಂಶವನ್ನು ಮಿಸೆಸ್ ರ್ಯಾಡ್‍ಕ್ಲಿಫ್ ಮುಂತಾದವರ ಕಾದಂಬರಿಗಳೂ ವೆಬ್‍ಸ್ಟರ್ ಮುಂತಾದವರ ನಾಟಕಗಳೂ ಸಮರ್ಥಿಸುತ್ತವೆ. ಅದ್ಭುತ ಅಂಶ ಪರಿಣಾಮಕಾರಿಯಾಗಲು ಒಂದು ತೆರನಾದ ವಿವರಣಾತೀತ ಅಸ್ಪಷ್ಟತೆಯನ್ನೂ ಅಸಂಬದ್ಧವಲ್ಲದ ಆಕಸ್ಮಿಕಗಳನ್ನೂ ಸೃಷ್ಟಿಸುತ್ತಾರೆ. ಹ್ಯಾಮ್‍ಲೆಟ್, ಮ್ಯಾಕ್‍ಬೆತ್ ರುದ್ರನಾಟಕಗಳಲ್ಲಿ ಷೇಕ್ಸ್‍ಪಿಯರ್ ಅದ್ಭುತ ಅಂಶಗಳನ್ನು ಪ್ರಯೋಗಿಸಿದ ರೀತಿ ಗಮನಾರ್ಹ.
	
ರೊಮ್ಯಾಂಟಿಕ್ ಸಂಪ್ರದಾಯ ಪುನರುಜ್ಜೀವನಗೊಳಿಸಿದ ಅದ್ಭುತ ಅಂಶಗಳು ವೈವಿಧ್ಯಮಯವಾದ ಸಾಹಿತ್ಯಪರಂಪರೆಯನ್ನು ಸೃಜಿಸಿವೆ. ಆಧುನಿಕಕಾಲದಲ್ಲಿ ಲೂಯಿ ಕೆರೋಲ್, ಫ್ರಾನ್ಜ್ ಕಾಫ್ಕ ಮುಂತಾದವರ ವಿಚಿತ್ರಕಥೆಗಳು, ಅತೀವ ವಾಸ್ತವಿಕತೆ (ಸರ್ರಿಯಲಿಸಂ) ಶೈಲಿಯ ಸ್ವಪ್ನಸಾಹಿತ್ಯ ಕೃತಿಗಳು, ಅದ್ಭುತ ಅಂಶಗಳನ್ನು ತಮ್ಮದೇ ಆದ ರೀತಿಯಲ್ಲಿ ಆಳವಡಿಸಿಕೊಂಡಿವೆ. ಐಹಿಕ ಪ್ರಪಂಚದ ಹಿನ್ನೆಲೆಯಲ್ಲಿ ಅವ್ಯಕ್ತಶಕ್ತಿಯ ವಿನ್ಯಾಸ ನಡೆಯುತ್ತಿದೆ ಎಂಬ ಅಭಿಪ್ರಾಯವನ್ನು ಮೂಡಿಸಲು, ವಾಸ್ತವಲೋಕದ ಕಟ್ಟುಪಾಡುಗಳಿಂದ ಮುಕ್ತಿಬಯಸಲು, (ಉದಾ: ಕುವೆಂಪು ಅವರ ಕೆಲವು ನಾಟಕಗಳು, ರಾಮಾಯಣ ದರ್ಶನಂ ಮಹಾಕಾವ್ಯ; ಪು.ತಿ.ನ. ಅವರ ಕೆಲವು ಗೀತರೂಪಕಗಳು.) ಅದ್ಭುತ ಅಂಶಗಳನ್ನು ಸಾಹಿತ್ಯದಲ್ಲಿ ಬಳಸಿರುವುದು ಸ್ವಾರಸ್ಯ ಸಂಗತಿ. ಅದೇನೇ ಇರಲಿ, ಈ ಅಂಶಗಳು, ಮಾನವನ ಆತ್ಮಸಂವೇದನೆ, ಜೀವನದ ಗೊತ್ತು ಗುರಿಯನ್ನು ಕುರಿತ ಚಿಂತನೆಗಳನ್ನು ಮೂಡಿಸಲು ನೆರವಾಗಿವೆಯೆನ್ನುವುದಂತೂ ನಿಜ.				(ಎಚ್.ಕೆ.ಆರ್.)
	
ಸಾಹಿತ್ಯ ಕೃತಿಗಳು ಅದ್ಭುತ ಅಂಶಗಳನ್ನು ಹಲವು ರೀತಿಯಲ್ಲಿ ಒಳಗೊಳ್ಳಬಹುದು. ಮಹಾಕಾವ್ಯಗಳ ಕಥಾವಸ್ತುಗಳಿಗೆ ಆಕಾರವಾದ ಪೌರಾಣಿಕ ಕಥೆಗಳನ್ನು ರಚಿಸಿದವರ ಕಲ್ಪನೆಯು ಮಾನವಲೋಕ, ಮಾನವಾತೀತ ಲೋಕ ಎಂಬ ವ್ಯತ್ಯಾಸವನ್ನು ಗುರುತಿಸುವುದೇ ಇಲ್ಲಿ ಎನ್ನಬಹುದು. ಎರಡು ಲೋಕಗಳವರೂ ಅಷ್ಟರಮಟ್ಟಿಗೆ ಪರಸ್ಪರರ ಲೋಕಗಳಿಗೆ ಭೇಟಿ ನೀಡುತ್ತಾರೆ, ವ್ಯವಹರಿಸುತ್ತಾರೆ, ಗಂಡ-ಹೆಂಡತಿಯರಾಗುವುದು ಉಂಟು. ಶಿವರಾಮಕಾರಂತರ ಮೂಕಜ್ಜಿಯ ಕನಸುಗಳಂತೆ ಈ ಕೃತಿಯು ಅದ್ಭುತದ ಅಂಶವನ್ನು ತಂತ್ರದ ಸೌಲಭ್ಯಕ್ಕಾಗಿ ಮಾತ್ರವೇ ಬಳಸಿಕೊಳ್ಳಬಹುದು. ಕಾಳಿದಾಸನ ಅಭಿಜ್ಞಾನ ಶಾಕುಂತಳಾ, ಷೇಕ್ಸ್‍ಪಿಯರ್‍ನ 'ಹ್ಯಾಮ್‍ಲೆಟ್‍ಗಳಂತೆ ಕೃತಿಯು ಕೃತಿಕಾರನ ಬದುಕಿನ ದರ್ಶನಕ್ಕೆ ರೂಪಕೊಡುವಲ್ಲಿ ಅನಿವಾರ್ಯವಾದ, ಅರ್ಥವತ್ತಾದ ಭಾಗವನ್ನಾಗಿ ಬಳಸಿಕೊಳ್ಳಬಹುದು. ಕೋಲ್‍ರಿಜ್‍ನ 'ದಿ ಏನ್ಷಂಟ್ ಮ್ಯಾರಿನರ್ ಇದಕ್ಕೊಂದು ಅದ್ಭುತ ನಿದರ್ಶನ. ಇಂಥ ಕೃತಿಗಳಲ್ಲಿ ಅದ್ಭುತದ ಅಂಶವು ಬದುಕಿನ ಹಿಂದಿರುವ ಒಂದು ನೈತಿಕ ಶಕ್ತಿಯ ಸಂಕೇತವಾಗುತ್ತದೆ. ಬೇಂದ್ರೆಯವರ ಕೆಲವು ಕವನಗಳಲ್ಲಿ ಅದ್ಭುತದ ಅಂಶವು ಮಾತನ್ನು ಮೀರಿದ ಆಧ್ಯಾತ್ಮಿಕ ಅನುಭವಗಳಿಗೆ ಭಾಷಾಶರೀರವನ್ನು ನೀಡುವಲ್ಲಿ ನೆರವಾಗುತ್ತದೆ. 'ಮ್ಯಾಜಿಕ್ ರಿಯಲಿಸಂ' ಒಂದಕ್ಕಿಂತ ಹೆಚ್ಚು ವಾಸ್ತವತೆಗಳನ್ನು ಓದುಗರ ಅನುಭವಕ್ಕೆ ತಂದುಕೊಡಲು ಅದ್ಭುತದ ಅಂಶವನ್ನು ಬಳಸುತ್ತಿದೆ. ಫ್ರಾನ್ಜ್ ಕಾಫ್ಕನ 'ಮೆಟಮಾರ್ಫಸಿಸ್ ಕಥೆ, ಗೇಬ್ರಿಯಲ್ ಗಾರ್ಸಿಯಾ ಮಾಕ್ರ್ವೇಸನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿ ಇದಕ್ಕೆ ನಿದರ್ಶನಗಳು. 
(ಪರಿಷ್ಕರಣೆ: ಪ್ರೊ. ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ